ನೂತನ ಶರಣರು -
	ವೀರಶೈವ ಗ್ರಂಥಕಾರರು 12ನೆಯ ಶತಮಾನಕ್ಕೆ ಹಿಂದಿದ್ದ ಶೈವಧರ್ಮ ಸಂಸ್ಥಾಪಕರು ಹಾಗೂ ಪ್ರಸಾರಕರನ್ನು ಪುರಾತನರು, ಪ್ರಮಥರು ಎಂದು ಕರೆದಿದ್ದಾರೆ. ತಮಿಳುನಾಡಿನ ತಿರುನೀಲಕಂಠದಿಂದ ಹಿಡಿದು ಸೌಂದರ್ಯನಂಬಿಯವರೆಗಿನ ಅರುವತ್ತು ಮೂರು ಭಕ್ತರೇ ಆ ಪುರಾತನರು. ಬಸವಣ್ಣನವರಿಂದ ಈಚೆಗೆ ಕರ್ನಾಟಕದಲ್ಲಿ ಆಗಿಹೋದ ಪ್ರಸಿದ್ಧ ಶಿವಭಕ್ತರನ್ನು ನೂತನರು ಎಂಬ ಹೆಸರಿನಿಂದ ಕರೆಯಲಾಗಿದೆ. ಇವರು `ಆಚಾರವೇ ಪ್ರಾಣವಾಗಿಯಾಚರಿಸಿ ಜಗದಾರ್ಯರೊಡೆವೆರೆದ ಮಹಾನುಭಾವರು ಎಂದು ಪರಿಗಣಿತರಾಗಿದ್ದಾರೆ. ಇವರಲ್ಲಿ ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ಧರಾಮ, ಕೆರೆಯ ಪದ್ಮರಸ, ಪಾಲ್ಕುರಿಕೆ ಸೋಮನಾಥ, ಪಂಡಿತಾರಾಧ್ಯ, ರೇವಣಸಿದ್ಧ, ಮರುಳಾರಾಧ್ಯ, ಶಿವಾರಾಧ್ಯ, ಏಕಾಂತರಾಮಯ್ಯ, ಆದಿಶೇಷ, ಸತ್ಯಕ್ಕ, ಬಿಜ್ಜಾದೇವಿ, ವರದಾನೆ ಗುಡ್ಡಮ್ಮ ಮುಂತಾದ ಶರಣರು ಸೇರಿದ್ದಾರೆ.							(ಬಿ.ಎಸ್.)

	ಈ ನೂತನರ ಸಂಖ್ಯೆ ನಿರ್ದಿಷ್ಟವಾಗಿಲ್ಲ. ಇವರ ಸಂಖ್ಯೆ ಸಾವಿರಕ್ಕೂ ಮಿಕ್ಕಿದೆ. ಅಲ್ಲದೆ ಈ ಪಟ್ಟಿ ಕಾಲಕಾಲಕ್ಕೆ, ಕವಿಯಿಂದ ಕವಿಗೆ ಬೆಳೆಯುತ್ತದೆ. ಪುರಾತನರನ್ನು ಕುರಿತಾದ ಗ್ರಂಥಗಳು ಇದ್ದಂತೆ ನೂತನರ ಬಗ್ಗೆ ಅಧಿಕೃತ ಗ್ರಂಥಗಳಿಲ್ಲ. ಕೆಲವು ಗ್ರಂಥಗಳಲ್ಲಿ ಪ್ರಾಸಂಗಿಕವಾಗಿ ಕೆಲವರ ಹೆಸರುಗಳು ಉಲ್ಲೇಖವಾಗಿವೆ ಅಥವಾ ಅವರ ಬಗ್ಗೆ ಗೌರವ ತಳೆದ ಕವಿ ಕೆಲವರನ್ನು ಕೀರ್ತಿಸಿರುವುದುಂಟು. ಹೀಗಾಗಿ ನೂತನರಲ್ಲಿ ಕೆಲವರ ಬಗೆಗಿನ ಮಾಹಿತಿಗಳು ಬಸವಪುರಾಣ, ಪ್ರಭುಲಿಂಗಲೀಲೆ, ಚನ್ನಬಸವಪುರಾಣ, ವೀರಶೈವಾಮೃತಮಹಾಪುರಾಣ, ಆರಾಧ್ಯಚಾರಿತ್ರ, ರೇವಣಸಿದ್ಧೇಶ್ವರಪುರಾಣ, ಸಿಂಗಿರಾಜಪುರಾಣ, ಭೈರವೇಶ್ವರಕಾವ್ಯ, ಸಿದ್ಧೇಶ್ವರಪುರಾಣ, ಪಾಲ್ಕುರಿಕೆ ಸೋಮನಾಥ ಪುರಾಣ, ರಾಘವಾಂಕ ಚಾರಿತ್ರ, ಗುರುರಾಜಚಾರಿತ್ರ ಮೊದಲಾದ ಗ್ರಂಥಗಳಲ್ಲಿ ದೊರಕುತ್ತದೆ. ಈಚೆಗೆ, ವಚನಶಾಸ್ತ್ರಪಿತಾಮಹರೆನಿಸಿದ ಫ.ಗು. ಹಳಕಟ್ಟಿಯವರು ತಮ್ಮ ಶಿವಶರಣರ ಚರಿತ್ರೆಗಳಲ್ಲಿ (ಭಾಗ 1,2, ಮತ್ತು 3) ಅಂಥ ಕೆಲವು ಶರಣರ ಜೀವನ ಚರಿತ್ರೆಗಳನ್ನು ನಿರೂಪಿಸಿದ್ದಾರೆ. ಪುರಾತನರನ್ನು ಕುರಿತು ರಗಳೆಗಳನ್ನು ರಚಿಸಿದ ಹರಿಹರನೇ ನೂತನರನ್ನೂ ಕುರಿತು ಹಾಡಿದ ಕವಿಗಳಲ್ಲಿ ಮೊದಲಿಗ. ಅವುಗಳಲ್ಲಿ ಬಸವರಾಜದೇವರ ರಗಳೆ, ಪ್ರಭುದೇವರ ರಗಳೆ, ಮಹದೇವಿಯಕ್ಕಗಳ ರಗಳೆಗಳನ್ನು ಹೆಸರಿಸಬಹುದು. ಅಲ್ಲದೆ ತನ್ನ ಲಿಂಗಾರ್ಚನೆಯ ರಗಳೆಯಲ್ಲಿ ನೂತನ ಶರಣರ ಹೆಸರುಗಳಲ್ಲಿ ಕೆಲವರನ್ನು ಸ್ಮರಿಸಿದ್ದಾನೆ.

	ನೂತನರ ಬಗ್ಗೆ ಸ್ಪಷ್ಟ ಉಲ್ಲೇಖ ಸಿಕ್ಕುವುದು ಲಕ್ಕಣದಂಡೇಶನ ಶಿವತತ್ತ್ವ ಚಿಂತಾಮಣಿ, ಮಲ್ಲಣಾರ್ಯನ ವೀರಶೈವಾಮೃತಮಹಾಪುರಾಣ ಮತ್ತು ಸಿದ್ಧ ನಂಜೇಶನ ಗುರುರಾಜಚಾರಿತ್ರಗಳಲ್ಲಿ.

 	ಲಕ್ಕಣ ದಂಡೇಶ ಸುಮಾರು ಆರು ನೂರು ನೂತನರ ವೃತ್ತಾಂತಗಳನ್ನು ನಿರೂಪಿಸಿದ್ದಾನೆ. 256 ವಾರ್ಧಕ ಷಟ್ಪದಿಗಳಲ್ಲಿ ನೂತನ ಶರಣರ ಊರು, ಕಾಯಕ, ಸಾಧನೆ ಮಹಾತ್ಮ್ಯಗಳನ್ನು ಸಂಕ್ಷೀಪ್ತ್ತವಾಗಿ, ಹೃದ್ಯವಾಗಿ ಬಿತ್ತರಿಸಿದ್ದಾನೆ. ಇದರಲ್ಲಿ ನಾನಾ ದೇಶದ ನಾನಾ ಕಾಯಕದ, ನಾನಾ ಜಾತಿಯ ಜನರಿದ್ದಾರೆ.

	ಮಲ್ಲಣಾರ್ಯ ತನ್ನ ವೀರಶೈವಾಮೃತಮಹಾಪುರಾಣದಲ್ಲಿ ನೂತನ ಶರಣರ ಕಥಾನಕಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ನಿರೂಪಿಸಿದ್ದಾನೆ.

	ಅನಂತರ ಬಂದ ಸಿದ್ಧನಂಜೇಶ ತನ್ನ ಗುರುರಾಜಚಾರಿತ್ರದಲ್ಲಿ ನೂತನರ ಪಟ್ಟಿಗೆ ಇನ್ನೂ ಕೆಲವರನ್ನು ಸೇರಿಸಿ ವರ್ಣಿಸಿದ್ದಾನೆ.

	ಪುರಾತನರಲ್ಲಿ ಹೇಗೆಯೋ ಹಾಗೇ ನೂತನರಲ್ಲಿಯೂ ಜಾತಿ ಮತಭೇದಗಳಿಲ್ಲ. ಆಳು ಅರಸೆಂಬ ತಾರತಮ್ಯವಿಲ್ಲ. ಇವರಲ್ಲಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರರೆಂಬ ಬಹುಚತುವರ್ಣದವರೂ ಇದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ಬೇರೆಬೇರೆ ದೇಶಗಳವರೂ ಇದ್ದಾರೆ. ಇವರು ಕಾಲ್ಪನಿಕ ವ್ಯಕ್ತಿಗಳಲ್ಲ. ಇವರ ಬಗ್ಗೆ ಅನೇಕ ಐತಿಹಾಸಿಕ ಅಂಶಗಳೂ ದೊರೆತಿವೆ. ಇವರಲ್ಲಿ ಕೆಲವರ ಹೆಸರಿನ ದೇಗುಲಗಳೂ ಇವೆ. ಅವಕ್ಕೆ ರಾಜರು, ಸಾಮಂತರು ದಾನಗಳನ್ನು ನೀಡಿರುವ ಬಗ್ಗೆ ಶಾಸನಗಳೂ ಇವೆ. ಅನೇಕ ಗ್ರಂಥಗಳಲ್ಲಿ ಇವರ ಐತಿಹ್ಯ ಮೂಡಿಬಂದಿದೆ. ಇವರಲ್ಲಿ ಕೆಲವರು ಸ್ವತಃ ಕವಿಗಳೂ ವಚನಕಾರರೂ ಆಗಿದ್ದಾರೆ.											(ಟಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ